ಕಗ್ಗ 1
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು ಜನಂ । ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ॥
44/945 ಕಗ್ಗಗಳು
189 ಪುಟ ವೀಕ್ಷಣೆಗಳು
ಕಗ್ಗ 1
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು ಜನಂ । ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ॥
ಕಗ್ಗ 2
ಜೀವ ಜಡರೂಪ ಪ್ರಪಂಚವನದಾವುದೋ ಆವರಿಸಿಕೊಂಡುಮೊಳನೆರೆದುಮಿಹುದಂತೆ । ಭಾವಕೊಳಪಡದಂತೆ ಅಳತೆಗಳವಡದಂತೆ ಆ ವಿಶೇಷಕೆ ಮಣಿಯೋ ಮಂಕುತಿಮ್ಮ ॥
ಕಗ್ಗ 3
ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ ಮಹಿಮೆಯಿಂ ಜಗವಾಗಿ ಜೀವವೇಷದಲಿ । ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ಗಹನ ತತ್ತ್ವಕೆ ಶರಣೋ ಮಂಕುತಿಮ್ಮ ॥
ಕಗ್ಗ 4
ಏನು ಜೀವನದರ್ಥ ಏನು ಪ್ರಪಂಚಾರ್ಥ ಏನು ಜೀವಪ್ರಪಂಚಗಳ ಸಂಬಂಧ । ಕಾಣದಿಲ್ಲಿರ್ಪುದೇನಾನುಮುಂಟೆ ಅದೇನು ಜ್ಞಾನಪ್ರಮಾಣವೇಂ ಮಂಕುತಿಮ್ಮ ॥
ಕಗ್ಗ 5
ದೇವರೆಂಬುದದೇನು ಕಗ್ಗತ್ತಲ ಗವಿಯೆ ನಾವರಿಯಲಾರದೆಲ್ಲದರೊಟ್ಟು ಹೆಸರೇ । ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು ಸಾವು ಹುಟ್ಟುಗಳೇನು ಮಂಕುತಿಮ್ಮ ॥
ಕಗ್ಗ 6
ಒಗಟೆಯೇನೀಸೃಷ್ಟಿ ಬಾಳಿನರ್ಥವೇನು ಬಗೆದು ಬಿಡಿಸುವರಾರು ಸೋಜಿಗವನಿದನು । ಜಗವ ನಿರಮಿಸಿದ ಕೈಯೊಂದಾದೊಡೇಕಿಂತು ಬಗೆಬಗೆಯ ಜೀವಗತಿ ಮಂಕುತಿಮ್ಮ ॥
ಕಗ್ಗ 7
ಬದುಕಿಗಾರ್ ನಾಯಕರು ಏಕನೋ ಅನೇಕರೋ ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ । ಕುದುರುವುದೆಂತು ಈಯವ್ಯವಸ್ಥೆಯ ಪಾಡು ಅದಿಗುದಿಯೆ ಗತಿಯೇನೋ ಮಂಕುತಿಮ್ಮ ॥
ಕಗ್ಗ 8
ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ ಭ್ರಮಿಪುದೇನಾಗಾಗ ಕರ್ತೃವಿನ ಮನಸು । ಮಮತೆಯುಳ್ಳವನಾತನಾದೊಡೀ ಜೀವಗಳು ಶ್ರಮಪಡುವುದೇಕಿಂತು ಮಂಕುತಿಮ್ಮ ॥
ಕಗ್ಗ 9
ಏನು ಭೈರವಲೀಲೆಯೀ ವಿಶ್ವಭ್ರಮಣೆ ಏನು ಭೂತಗ್ರಾಮನರ್ತನೋನ್ಮಾದ । ಏನಗ್ನಿ ಗೋಳಗಳು ಏನಂತರಾಳಗಳು ಏನು ವಿಸ್ಮಯ ಸೃಷ್ಟಿ ಮಂಕುತಿಮ್ಮ ॥
ಕಗ್ಗ 10
ಏನು ಪ್ರಪಂಚವಿದು ಏನು ಧಾಳಾಧಾಳಿ ಏನದ್ಭುತಾಪಾರಶಕ್ತಿ ನಿರ್ಘಾತ । ಮಾನವನ ಗುರಿಯೇನು ಬೆಲೆಯೇನು ಮುಗಿವೇನು ಏನರ್ಥವಿದಕೆಲ್ಲ ಮಂಕುತಿಮ್ಮ ॥
ಕಗ್ಗ 11
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ । ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ ಎತ್ತಲಿದಕೆಲ್ಲ ಕಡೆ ಮಂಕುತಿಮ್ಮ ॥
ಕಗ್ಗ 12
ಮಾನವರೋ ದಾನವರೋ ಭೂಮಾತೆಯನು ತಣಿಸೆ ಶೋಣಿತವನೆರೆಯುವರು ಬಾಷ್ಪಸಲುವುದಿರೆ । ಏನು ಹಗೆ ಏನು ಧಗೆ ಏನು ಹೊಗೆಯೀ ಧರಣಿ ಸೌನಿಕನ ಕಟ್ಟೆಯೇಂ ಮಂಕುತಿಮ್ಮ ॥
ಕಗ್ಗ 13
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ಧರಣಿಗನುದಿನದ ರಕ್ತಾಭಿಷೇಚನೆಯೇ । ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ ಮಂಕುತಿಮ್ಮ ॥
ಕಗ್ಗ 14
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು- ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು । ಒಂದೇ ಗಾಳಿಯನುಸಿರ್ವ ನರಜಾತಿಯೊಳಗೆಂತು ಬಂದುದೀ ವೈಷಮ್ಯ ಮಂಕುತಿಮ್ಮ ॥
ಕಗ್ಗ 15
ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿದೆ ಮಾಸಿ ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ । ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತಿದೆ ಲೋಕ ಮಂಕುತಿಮ್ಮ ॥
ಕಗ್ಗ 16
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ- ವಲೆವಂತೆ ಲೋಕ ತಲ್ಲಣಿಸಿಹುದಿಂದು । ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆಯೆಂದೋ ಮಂಕುತಿಮ್ಮ ॥
ಕಗ್ಗ 17
ತಳಮಳವಿದೇನಿಳೆಗೆ ದೇವದನುಜರ್ ಮಥಿಸೆ ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ । ಹಾಲಾಹಲವ ಕುಡಿವ ಗಿರೀಶನಿರ್ದೊಡೀ ಕಳವಳವದೇತಕೆಲೋ ಮಂಕುತಿಮ್ಮ ॥
ಕಗ್ಗ 18
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ । ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕಬುದ್ಬುದವೆಲ್ಲ ಮಂಕುತಿಮ್ಮ ॥
ಕಗ್ಗ 19
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳದು ಆಳೆನಿಪುದಂತಾಗದಿರೆ ಬರಿಯ ಹೆಂಟೆ । ಬಾಳೇನು ಧೂಳುಸುಳಿ ಮರ ತಿಕ್ಕಿದುರಿಯ ಹೊಗೆ ಕ್ಷೇಳವೇನಮೃತವೇಂ ಮಂಕುತಿಮ್ಮ ॥
ಕಗ್ಗ 20
ಕಂಡದೈವಕ್ಕೆಲ್ಲ ಕೈಯ ಮುಗಿದೇನಹುದು ಚಂಡಚತುರೋಪಾಯದಿಂದಲೇನಹುದು । ತಂಡುಲದಹಿಡಿಯೊಂದು ತುಂಡುಬಟ್ಟೆಯದೊಂದು ಅಂಡಲೆತವಿದಕೇನೋ ಮಂಕುತಿಮ್ಮ ॥
ಕಗ್ಗ 21
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ ಮಣ್ಣೆನುವನ್ ಅವನವರ ಮಣ್ಣೆನುವೆ ನೀನು । ಭಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯಂತೋ ಮಂಕುತಿಮ್ಮ ॥
ಕಗ್ಗ 22
ಕೃತ್ರಿಮವೋ ಜಗವೆಲ್ಲ ಸತ್ಯತೆಯದೆಲ್ಲಿಹುದೋ ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು । ಚತ್ರವೀ ಜಗವಿದರೋಳಾರ ಗುಣವೆಂತಹುದೋ ಯಾತ್ರಿಕನೆ ಜಾಗರಿರೋ ಮಂಕುತಿಮ್ಮ ॥
ಕಗ್ಗ 23
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು । ಮರಳಿ ಕೊರಗಾಡುವುದು ಕೆರಳುವುದು ನರಳುವುದು ಇರವಿದೇನೊಣರಗಳೇ ಮಂಕುತಿಮ್ಮ ॥
ಕಗ್ಗ 24
ನರರ ಬಯಕೆಗಳೆ ಸುರರ ತಾಯ್ತಂದೆಗಳೋ ಸುರರಟ್ಟಹಾಸದಿನೆ ನರಭಕ್ತಿಯೊರಲೋ । ಪರಕಿಸುವರೇನವರ್ಗಳನ್ಯೋನ್ಯಶಕ್ತಿಗಳ ಧರುಮವೆಲ್ಲಿದರಲ್ಲಿ ಮಂಕುತಿಮ್ಮ ॥
ಕಗ್ಗ 25
ಜೀವಗತಿಗೊಂದು ರೇಖಾಲೇಖವಿರಬೇಕು ನಾವಿಕನಿಗಿರುವಂತೆ ದಿಕ್ಕುದಿನವೆಣಿಸೆ । ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ ಆವುದೀ ಜಗಕಾದಿ ಮಂಕುತಿಮ್ಮ ॥
ಕಗ್ಗ 26
ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ ಇಷ್ಟ ಮೋಹಕ ದಿವ್ಯ ಗುಣಗಳೊಂದು ಕಡೆ । ಕಷ್ಟ ಭೀಭತ್ಸ ಘೋರಗಳಿನ್ನೊಂದು ಕಡೆ ಕ್ಲಿಷ್ಟವೀ ಬ್ರಹ್ಮ ಕೃತಿ ಮಂಕುತಿಮ್ಮ ॥
ಕಗ್ಗ 27
ಧರೆಯ ಬದುಕೇನದರ ಗುರಿಯೇನು ಫಲವೇನು ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ । ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾದಿಪುದೇನು ಮಂಕುತಿಮ್ಮ ॥
ಕಗ್ಗ 28
ಕಾರುಣ್ಯ ಸರಸ ಸೌಂದರ್ಯ ರುಚಿಗಳೇ ಸೃಷ್ಟಿ ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ । ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ ತೋರುವುದಾವುದು ದಿಟವೋ ಮಂಕುತಿಮ್ಮ ॥
ಕಗ್ಗ 29
ಎರಡುಮಿರಬಹುದು ದಿಟ ಶಿವರುದ್ರನೆಲೆ ಬೊಮ್ಮ ಕರವೊಂದರಲಿ ವೇಣು ಶಂಖವೊಂದರಲಿ । ಬೆರಳ್ಗೆಳೆರಡಾನುಮಿರೆ ಕೈ ಚಿಟಿಕೆಯಾಡುವುದು ಒರುವನಾಡುವುದೆಂತು ಮಂಕುತಿಮ್ಮ ॥
ಕಗ್ಗ 30
ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿಥ್ಯೆಯೆನ್ನುವೊಡೆ ಸಂಬಂಧವಿಲ್ಲವೇನು ವಿಷಯಯುಗಕೆ । ನಮ್ಮ ಕಣ್ಮನಸುಗಳೇ ನಮಗೆ ಸಟೆ ಪೇಳುವೊಡೆ ನೆಮ್ಮುವುದದಾರನೋ ಮಂಕುತಿಮ್ಮ ॥
ಕಗ್ಗ 31
ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು । ಅಚ್ಚರಿಯ ತಂತ್ರವಿದು ಬ್ರಹ್ಮ ಸೃಷ್ಟಿಗಳೇಕೋ ಮುಚ್ಚಿಹವು ಸಾಜತೆಯ ಮಂಕುತಿಮ್ಮ ॥
ಕಗ್ಗ 32
ಪರಬೊಮ್ಮನೀ ಜಗವ ರಚಿಸಿದವನಾದೊಡದು ಬರಿಯಾಟವವೋ ಕನಸೋ ನಿದ್ದೆ ಕಲವರಸವೋ । ಮರುಳನವನಲ್ಲದೊಡೆ ನಿಯಮವೊಂದಿರಬೇಕು ಗುರಿಗೊತ್ತದೇನಿಹುದೋ ಮಂಕುತಿಮ್ಮ ॥
ಕಗ್ಗ 33
ನರಪರೀಕ್ಷೆಯೇ ಬೊಮ್ಮನಾಶಯವೇ ನಮ್ಮ ಬಾಳ್ ಬರಿ ಸಮಸ್ಯೆಯೆ ಅದರ ಪೂರಣವದೆಲ್ಲಿ । ಸುರಿದು ಪ್ರಶ್ನೆಗಳನುತ್ತರವ ಕುಡೆ ಬಾರದನ ಗುರುವೆಂದು ಕರೆಯುವೆಯ ಮಂಕುತಿಮ್ಮ ॥
ಕಗ್ಗ 34
ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ ಸೃಷ್ಟಿಯಲಿ ತತ್ವವೆಲ್ಲಿಯೋ ಬೆದಕಿ ನರನು । ಕಷ್ಟಪಡುತಿರಲೆನುವುದೇ ಬ್ರಹ್ಮ ವಿಧಿಯೇನೋ ಅಷ್ಟೇ ನಮ್ಮಯ ಪಾಡು ಮಂಕುತಿಮ್ಮ ॥
ಕಗ್ಗ 35
ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು । ಅರಿತೆನಾನೆನ್ನುವಂತಾಗೆ ಕೃತಿಕೌಶಲದ ಹಿರಿಮೆಗದು ಕುಂದಲ್ತೆ ಮಂಕುತಿಮ್ಮ ॥
ಕಗ್ಗ 36
ಎಲ್ಲೆಲಿಯುಂ ಮೋಹಸಂಭ್ರಾಂತಿಗಳ ಕವಿಸಿ ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡೆಸಿ । ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ ಸೊಲ್ಲಿಪುದು ಸರಿಯೇನೋ ಮಂಕುತಿಮ್ಮ ॥
ಕಗ್ಗ 37
ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನ ಅವನ ವೇಷಗಳೇಕೆ ಮಾರ್ಪಡುತಲಿಹವು । ತವಕಪಡನೇತಕೋ ಕುರುಹ ತೋರಲು ನಮಗೆ ಅವಿತುಕೊಂಡಿಹುದೇಕೋ ಮಂಕುತಿಮ್ಮ ॥
ಕಗ್ಗ 38
ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ ತೋರಿಪೂಸರವಳ್ಳಿಯಂತೇನು ಬೊಮ್ಮಂ । ಪೂರ ಮೈದೋರೆನೆಂಬಾ ಕಪಟಿಯಂಶಾವ ತಾರದಿಂದಾರ್ಗೇನು ಮಂಕುತಿಮ್ಮ ॥
ಕಗ್ಗ 39
ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ । ಒಸೆದೇತಕವನೀಯನೆಮಗೊಂದು ನಿಜ ಕುರುಹ ನಿಷೆಯೊಳುಡಕರಡವವೊಲು ಮಂಕುತಿಮ್ಮ ॥
ಕಗ್ಗ 40
ನಿಶೆಯೊಳೇಂ ಕಾಣಬಾರನು ಹಗಲನೊಲ್ಲದೊಡೆ ಶಶಿರವಿಗಳವನ ಮನೆಕಿಟಕಿಯಾಗಿರರೇಂ । ಮಸುಕುಬೆಳಕೊಂದಾದ ಸಂಜೆಮಂಜೇನವನು ಮಿಸುಕಿ ಸುಳಿಯುವ ಸಮಯ ಮಂಕುತಿಮ್ಮ ॥
ಕಗ್ಗ 41
ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು । ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು ಒದವಿಪರು ದಿಟದರಿವ ಮಂಕುತಿಮ್ಮ ॥
ಕಗ್ಗ 42
ಆಹ ಈ ಮೋಹಗಳೋ ನೇಹಗಳೋ ದಾಹಗಳೋ ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು । ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ ಈ ಹರಿಬದೊಳಗುಟ್ಟು ಮಂಕುತಿಮ್ಮ ॥
ಕಗ್ಗ 43
ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲುಂ ಮೂಲೆಮೂಲೆಯೆಲಿ ವಿದ್ಯುಲ್ಲಹರಿಯೊಂದು । ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ ಚಾಲಿಪುದು ಬಿಡು ಕೊಡದೆ ಮಂಕುತಿಮ್ಮ ॥
ಕಗ್ಗ 44
ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು ಸಂದೆ ನಸುಕಿನೊಳಿಹುದು ಜೀವನದ ಪಥವು । ಒಂದುಮೆಟುಕದು ಕೈಗೆ ಏನೋ ಕಣ್ಕೆಣಕುವುದು ಸಂದಿಯವೆ ನಮ್ಮ ಗತಿ ಮಂಕುತಿಮ್ಮ ॥